Saturday, November 17, 2007

Tamarind Chitranna - ಹುಳಿ ಚಿತ್ರಾನ್ನ

ಹುಳಿ ಚಿತ್ರಾನ್ನ ತಯಾರಿಸಿದಂತೆ ತಯಾರಿಸಿ,ಹುರಿದು ಪುಡಿ ಮಾಡಿದ ಮಸಾಲೆ ಹಾಕಿ ತಯಾರಿಸುವುದು-ಈ ಚಿತ್ರಾನ್ನ. ಇದು ಎಲ್ಲಾ ಚಿತ್ರಾನ್ನಗಳಿಗಿಂತ ತುಂಬಾ ರುಚಿಯಾಗಿರುತ್ತದೆ. ಸ್ವಲ್ಪ ಜಾಸ್ತಿ ತಿಂದರೂ ಗೊತ್ತಾಗಲ್ಲ. ನನ್ನ ಅಜ್ಜಿ ತುಂಬಾ ಚೆನ್ನಾಗಿ ಮಾಡುತ್ತಿದ್ದರು ಇದನ್ನು.ಅಮ್ಮ ಸಹ. ಆಗಿನ ಕಾಲದ ರುಚಿಗಳು ಈಗ ಇಲ್ಲ.ಅವರು ಕಡ್ಲೆಕಾಯಿಬೀಜದ ಬದಲಿಗೆ ಕಡ್ಲೆಕಾಳು ಹಾಕುತ್ತಿದ್ದರು.ತಿನ್ನುವಾಗ ಕಡ್ಲೆಕಾಳು ಸಿಕ್ಕಿದಾಗ ಅದೊಂಥರ ತುಂಬಾ ರುಚಿಯಾಗಿರುತ್ತಿತ್ತು. ಅಜ್ಜಿ ಮತ್ತು ಅಮ್ಮನ ನೆನಪಿನೊಂದಿಗೆ ಈ ರೆಸಿಪಿ ಬರೆದಿರುವೆ.
ಮಸಾಲೆ ಹುಳಿ ಚಿತ್ರಾನ್ನ:

ಬೇಕಾಗುವ ಸಾಮಗ್ರಿಗಳು;
ಅನ್ನ- ಎರಡು ಬಟ್ಟಲು,
ಹುಣಸೇಹಣ್ಣಿನ ರಸ (ಟ್ಯಾಮರಿಂಡ್ ಪಲ್ಪ್)-ಒಂದು ದೊಡ್ಡ ಚಮಚ
ಹೆಚ್ಚಿದ ಈರುಳ್ಳಿ
ಹೆಚ್ಚಿದ ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ-ಎರಡು
ಎಣ್ಣೆ
ಸಾಸಿವೆ, ಜೀರಿಗೆ
ಕರಿಬೇವು, ಅರಿಶಿಣ
ಕಡ್ಲೆಬೇಳೆ,ಉದ್ದಿನಬೇಳೆ
ಕಡ್ಲೆಕಾಯಿ ಬೀಜ
ಉಪ್ಪು, ನಿಂಬೆರಸ
ಕೊತ್ತುಂಬರಿಸೊಪ್ಪು ,ಕಾಯಿತುರಿ

ಹುರಿದು ಪುಡಿ ಮಾಡಿಕೊಳ್ಳಲು ಪದಾರ್ಥಗಳು:

ಜೀರಿಗೆ - ಎರಡು ಚಮಚ
ಮೆಂತ್ಯ- ಅರ್ಧ ಚಮಚ
ಸಾಸಿವೆ- ಒಂದು ಚಮಚ
ಎಳ್ಳು- ಎರಡು ಚಮಚ

ಇದಿಷ್ಟನ್ನು ಎಣ್ಣೆ ಹಾಕದೆ ಸ್ವಲ್ಪ ಹುರಿದು ಪುಡಿ ಮಾಡಿಕೊಳ್ಳಿ. ಎಳ್ಳನ್ನು ತರಿತರಿಯಾಗಿ ಪುಡಿ ಮಾಡಿ.

ತಯಾರಿಸುವ ವಿಧಾನ:ಉದುರು ಉದುರಾಗಿ ಮಾಡಿಕೊಂಡಿರುವ ಅನ್ನವನ್ನು ಅಗಲವಾದ ಪಾತ್ರೆಗೆ ಹಾಕಿ,ತಣ್ಣಗಾಗಲು ಬಿಡಿ.
ಬೇರೆ ಪಾತ್ರೆಯಲ್ಲಿ ಎಣ್ಣೆ ಹಾಕಿ,ಕಡ್ಲೆಕಾಯಿಬೀಜಗಳನ್ನು ಹಾಕಿ,ಅದನ್ನು ಚೆನ್ನಾಗಿ ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಎಣ್ಣೆಗೆ ಸಾಸಿವೆ, ಜೀರಿಗೆ, ಕರಿಬೇವು , ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸಿನಕಾಯಿ ಮತ್ತು ಒಣಮೆಣಸಿನಕಾಯಿ ಹಾಕಿ, ಒಂದು ನಿಮಿಷ ಹುರಿದು,ಹೆಚ್ಚಿದ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಬೆಂದಿದೆ ಎನಿಸಿದ ಮೇಲೆ,ಹುಣಸೇರಸ,ಅರಿಶಿಣ ಮತ್ತು ಉಪ್ಪು ಹಾಕಿ,ಮತ್ತೆ ಒಂದೆರಡು ನಿಮಿಷ ಬಾಡಿಸಿ. ಒಗ್ಗರಣೆಯನ್ನು ಕೆಳಗಿಳಿಸಿ,ಚೆನ್ನಾಗಿ ಬೆರೆಸಿ. ಈ ಒಗ್ಗರಣೆಯನ್ನು ಆರಿದ ಅನ್ನಕ್ಕೆ ಹಾಕಿ,ಅದರ ಜೊತೆ ಹುರಿದ ಕಡ್ಲೆಕಾಯಿ ಬೀಜಗಳನ್ನು ಹಾಕಿ,ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲೆಸಿ.ಕಾಯಿತುರಿ ಮತ್ತು ಕೊತ್ತುಂಬರಿಸೊಪ್ಪು ಸಹ ಹಾಕಿ ಬೆರೆಸಿ. ಇದೆಲ್ಲವನ್ನು ಕಲೆಸಿದ ಮೇಲೆ ಪುಡಿ ಮಾಡಿಟ್ಟು ಕೊಂಡಿರುವಂತ ಪದಾರ್ಥಗಳನ್ನು ಉದುರಿಸಿ, ಮತ್ತೆ ಚೆನ್ನಾಗಿ ಎಲ್ಲ ಕಡೆಯೂ ಬೆರೆಯುವಂತೆ ಕೈನಲ್ಲಿಯೇ ಚೆನ್ನಾಗಿ ಕಲೆಸಿಡಿ. ಇದನ್ನು ತಯಾರಿಸದ ತಕ್ಷಣವೇ ತಿನ್ನುವುದಕ್ಕಿಂತ ಸ್ವಲ್ಪ ಸಮಯದ ನಂತರ ತಿಂದರೆ ಒಂದು ರೀತಿ ರುಚಿ. ಒಗ್ಗರಣೆ ಒಂದೆರಡು ದಿನ ಚೆನ್ನಾಗಿ ಇರುತ್ತದೆ. ಯಾವಾಗ ಬೇಕಾದರು ಕಲೆಸಿಕೊಳ್ಳಬಹುದು. ರುಚಿಯಾದ ಮಸಾಲೆ ಹುಳಿ ಚಿತ್ರಾನ್ನ ತಯಾರಾಗುತ್ತದೆ.

No comments:

Popular Posts