Monday, March 3, 2008

ಪಾನಕ / Paanaka-’ಶ್ರೀ ರಾಮನವಮಿಯ ಪಾನಕ’

ಪಾನಕ ಅಂದ ತಕ್ಷಣ ನೆನಪಿಗೆ ಬರುವುದೇ ನಮ್ಮ ಹಬ್ಬ ’ಶ್ರೀ ರಾಮನವಮಿಯ ಪಾನಕ’. ಅವತ್ತಿನ ದಿನ ಮಾಡಿದ ಪಾನಕದ ರುಚಿಯೇ ಒಂಥರ! ರಾಮನವಮಿಗೆ ಪಾನಕ ಕೋಸುಂಬರಿಗಳು ಸರ್ವೇಸಾಮಾನ್ಯ. ನಮ್ಮ ಅಜ್ಜಿ ಎಲ್ಲಾ ಮಾಡುತ್ತಿದ್ದಂತ ಪಾನಕ,ಆಗ ನಾವು ಚಿಕ್ಕವರಿದ್ದಾಗ ಅದೇನು ರುಚಿ ಇರುತ್ತಿತ್ತು. ಅವತ್ತಿನ ದಿನವೆಲ್ಲಾ ಪಾನಕವನ್ನು ಕುಡಿಯುವುದೇ ಒಂದು ಕೆಲಸ.ಅವತ್ತು ಮನೆಯೆಲ್ಲಾ ಪಾನಕದ್ದೆ ಸುವಾಸನೆ,ಶುಂಠಿ-ಮೆಣಸಿನ ಪರಿಮಳ ತುಂಬಿರುತ್ತಿತ್ತು. ಅದೇನೋ ನಾವು ಅದೇ ರೀತಿ ಮಾಡಿದರೂ ಆಗಿನ ರುಚಿ ಬರಲ್ಲವೇನೋ? ಆ ಕಾಲದಲ್ಲಿ ಆಹಾರ ಪದಾರ್ಥಗಳು ಸಹ ಚೆನ್ನಾಗಿರುತ್ತಿತ್ತು. ಈಗ ಶುಂಠಿಯನ್ನು ಜಜ್ಜಿದರೂ ಅದರ ವಾಸನೆ ಬರುವುದೇ ಇಲ್ಲ. ಅದರ ಘಾಟು ಕೂಡ ಇರುವುದಿಲ್ಲ. ಹೇಗೋ ಕಾಲಕ್ಕೆ ತಕ್ಕಂತೆ ತಯಾರಿಸಿದರಾಯಿತು. ಪಾನಕ ತಯಾರಿಸುವ ಬಗೆ ತಿಳಿಯೋಣ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತೆ.

ಪಾನಕ:
ಸಾಮಗ್ರಿಗಳು:
ಬೆಲ್ಲ ರುಚಿಗೆ
ಒಣಶುಂಠಿ - ಒಂದೆರಡು
ಕಾಳು ಮೆಣಸು-ಅರ್ಧ ಚಮಚ
ಚಿಟಿಕೆ ಉಪ್ಪು
ಏಲಕ್ಕಿ ಪುಡಿ ಸ್ವಲ್ಪ
ನೀರು

ವಿಧಾನ:
ಬೆಲ್ಲವನ್ನು ಕುಟ್ಟಿಕೊಂಡು ಪುಡಿ ಮಾಡಿಕೊಳ್ಳಿ. ಒಣಶುಂಠಿಯನ್ನು ಸಹ ಚಚ್ಚಿಕೊಳ್ಳಿ,ಕಾಳು ಮೆಣಸನ್ನು ಸ್ವಲ್ಪ ಸ್ವಲ್ಪ ತರಿಯಾಗಿ,ದಪ್ಪವಾಗಿ ಕುಟ್ಟಿ.
ಪಾತ್ರೆಗೆ ನೀರು ಹಾಕಿ, ಅದಕ್ಕೆ ಕುಟ್ಟಿದ ಎಲ್ಲಾ ಸಾಮಾನುಗಳನ್ನು ಹಾಕಿ, ಚೆನ್ನಾಗಿ ಕೈನಲ್ಲಿಯೇ ಕಿವುಚಿ. ಬೆಲ್ಲ ಕರಗಿದ ನಂತರ ಏಲಕ್ಕಿ ಪುಡಿ ಮತ್ತು ಉಪ್ಪು ಹಾಕಿ ಬೆರೆಸಿ. ಇದನ್ನು ತಣ್ಣಗೂ / ಆಗೇಯೇ ಸೇವಿಸಬಹುದು

No comments:

Popular Posts