Sunday, April 27, 2008

Greengram Bassaru-ಹೆಸರುಕಾಳು ತರಕಾರಿ ಬಸ್ಸಾರು ಮತ್ತು ಪಲ್ಯ



ಹೆಸರುಕಾಳು ತರಕಾರಿ ಬಸ್ಸಾರು ಮತ್ತು ಪಲ್ಯ

ಸಾರಿಗೆ ಬೇಕಾಗುವ ಸಾಮಾಗ್ರಿಗಳು:


ಹೆಸರುಕಾಳು -ಎರಡು ಕಪ್
ಹುರುಳಿಕಾಯಿ/ಬೀನ್ಸ್
ಎಲೆಕೋಸು
ಈರುಳ್ಳಿ ಒಂದು
ಬೆಳ್ಳುಳ್ಳಿ
ಜೀರಿಗೆ ಒಂದು ದೊಡ್ಡ ಚಮಚ
ಮೆಣಸು ಕಾಳು -ಐದಾರು
ಅರಿಸಿನದಪುಡಿ
ಅಚ್ಚಖಾರದ ಪುಡಿ
ಸಾಂಬಾರ್/ಸಾರಿನ ಪುಡಿ - ಅರ್ಧ ಚಮಚ
ಕಾಯಿತುರಿ/ಕೊಬ್ರಿತುರಿ ಸ್ವಲ್ಪ-ಎರಡು ಚಮಚ
ಹುಣಸೆಹಣ್ಣು ಅಥವಾ ಹುಣಸೆರಸ
ಕೊತ್ತುಂಬರಿಸೊಪ್ಪು
ಕರಿಬೇವಿನ ಸೊಪ್ಪು
ಉಪ್ಪು
ಎಣ್ಣೆ

ತಯಾರಿಸುವವಿಧಾನ:
ಮೊದಲು ಹುರುಳಿಕಾಯಿ ಮತ್ತು ಎಲೆಕೋಸನ್ನು ಸಣ್ಣಗೆ ಹೆಚ್ಚಿಕೊಳ್ಳಿ.
ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಳೆದ ಹೆಸರುಕಾಳು, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ,ಕಾಳನ್ನು ಬೇಯಿಸಿ, ಸ್ವಲ್ಪ ಬೆಂದ ನಂತರ ಅದಕ್ಕೆ ಹೆಚ್ಚಿಟ್ಟುಕೊಂಡಿರುವ ತರಕಾರಿ ಹಾಕಿ ಜೊತೆಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ,ತರಕಾರಿ ಬೇಯುವವರೆಗೂ ಬೇಯಿಸಿ, ಕಾಳು ಕರಗದಂತೆ ಬೇಯಿಸಿಕೊಳ್ಳಿ.ತುಂಬಾ ನುಣ್ಣಗೆ ಬೇಯಿಸಬೇಡಿ, ನಂತರ ಕಾಳು ಮತ್ತು ತರಕಾರಿ ಮಿಶ್ರಣವನ್ನು ಜಾಲರಿಯಲ್ಲಿ (ಕೊಲಾಂಡರ್/ಸ್ಟ್ರೈನರ್) ಸೋಸಿಕೊಂಡು,ಸಾರಿನ ಕಟ್ಟು ಮತ್ತು ತರಕಾರಿ ಕಾಳು ಮಿಶ್ರಣವನ್ನು ಬೇರೆಬೇರೆಯಾಗಿ ತೆಗೆದಿಟ್ಟುಕೊಳ್ಳಿ.

ಸಾರಿಗೆ ರುಬ್ಬಿಕೊಳ್ಳಲು:
ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಒಂದೆರಡು ನಿಮಿಷ ಹುರಿದುಕೊಂಡು,ಅದಕ್ಕೆಎರಡು ಚಮಚ ಬೇಯಿಸಿ ಬಸಿದ ಕಾಳು-ತರಕಾರಿ ಮಿಶ್ರಣವನ್ನು,ಎರಡು ಚಮಚ ಕಾಯಿತುರಿ/ಕೊಬ್ರಿ, ಜೀರಿಗೆ, ಅಚ್ಚಖಾರದಪುಡಿ, ಮೆಣಸು, ಸಾರಿನಪುಡಿ, ಹುಣಸೆಹಣ್ಣು, ಕೊತ್ತುಂಬರಿಸೊಪ್ಪು ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.

ಸಾರಿನ ಒಗ್ಗರಣೆಗೆ-
ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ ಮತ್ತು ಜೀರಿಗೆ ಹಾಕಿ, ಕರಿಬೇವು, ಇಂಗು ಮತ್ತು ಜಜ್ಜಿದ ಬೆಳ್ಳುಳ್ಳಿಯನ್ನು ಹಾಕಿ ಅದರ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಕುದಿಸಿ, ಬಸಿದಿಟ್ಟುಕೊಂಡ ಕಾಳುತರಕಾರಿ ಮಿಶ್ರಣದ ಸಾರಿನಕಟ್ಟನ್ನು ಹಾಕಿ, ಚೆನ್ನಾಗಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಒಂದೇ ಒಂದು ಕುದಿ ಬರಿಸಿ ಇಳಿಸಿ. ಬಸ್ಸಾರು ತಯಾರು.

ಈಗ ಕಾಳು-ತರಕಾರಿ ಪಲ್ಯಕ್ಕೆ:
ಒಗ್ಗರಣೆಗೆ -
ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ,ಚಿಟಿಕೆ ಉಪ್ಪನ್ನು ಹಾಕಿ. ಅದನ್ನು ಹುರಿದುಕೊಂಡ ನಂತರ ತರಕಾರಿ-ಕಾಳು ಮಿಶ್ರಣವನ್ನು ಹಾಕಿ, ಚೆನ್ನಾಗಿ ಬೆರೆಸಿ. ಉಪ್ಪನ್ನು ಬೇಯುವಾಗ ಹಾಕಿರುವುದರಿಂದ ಈಗ ಬೇಕೆನಿಸಿದರೆ ಹಾಕಿಕೊಳ್ಳಿ. ಕೊನೆಯಲ್ಲಿ ತೆಂಗಿನತುರಿ ಹಾಕಿ ಚೆನ್ನಾಗಿ ಬೆರೆಸಿ. ಪಲ್ಯ ತಯಾರು.

* ಹುಣಸೇಹಣ್ಣನ್ನು ಹಾಕಿದರೆ ರುಬ್ಬುವಾಗ ಹಾಕಿ ಅಥವಾ ಹುಣಸೇರಸವನ್ನು ಉಪಯೋಗಿಸುವುದಾದರೆ ಸಾರು ಕುದಿಯುವಾಗ ಹಾಕಿ, ಕುದಿಸಿ, ಇಳಿಸಿ.
* ಸಾರಿಗೆ ಒಂದು ಸ್ವಲ್ಪ ಬೆಲ್ಲವನ್ನು ಹಾಕಬಹುದು.(ಇಷ್ಟಪಡುವವರು)
* ಪಲ್ಯಕ್ಕೆ ಕಾಯಿತುರಿ ಬೇಕಾದರೆ ಹಾಕಬಹುದು, ರುಚಿ ಹೆಚ್ಚು ಕೊಡುತ್ತದೆ. ಇಲ್ಲ ಅಂದರೆ ಕೊಕೊನಟ್ ಪೌಡರ್ ಕೂಡ ಹಾಕಬಹುದು.
* ಬಸ್ಸಾರಿಗೆ ಕೊತ್ತುಂಬರಿ ಸೊಪ್ಪು, ಬೆಳ್ಳುಳ್ಳಿ ಹೆಚ್ಚಿಗೆ ಇದ್ದರೆ ರುಚಿ ಜಾಸ್ತಿ. ಉಪ್ಪು ಮತ್ತು ಕಾರವೆಲ್ಲಾ ನಿಮ್ಮ ರುಚಿಗೆ ತಕ್ಕಂತೆ ಹಾಕಿ ತಯಾರಿಸಿ.
* ಬಸ್ಸಾರನ್ನು ರಾಗಿಮುದ್ದೆ ಮತ್ತು ಬಿಳಿ ಅನ್ನದೊಂದಿಗೆ ಸರ್ವ್ ಮಾಡಿ. ಬಸ್ಸಾರು ತಯಾರಿಸಿದ ದಿನಕ್ಕಿಂತ ಮಾರನೇದಿನ ತುಂಬಾ ರುಚಿಯಾಗಿರುತ್ತದೆ. ಈ ಸಾರು ಕುದಿಸಿದಷ್ಟು ರುಚಿ ಹೆಚ್ಚು.
* ಜಾಲರಿ ಎಂದರೆ colander / strainer ಇದನ್ನು ಉಪಯೋಗಿಸಿ ಕಟ್ಟು ಬಸಿದುಕೊಳ್ಳಿ.
* ಬಸ್ಸಾರು ನಮ್ಮ ಕರ್ನಾಟಕದಲ್ಲಿ ತುಂಬಾ ಮನೆಮಾತಾಗಿದೆ. ಬಸ್ಸಾರುಗಳಿಗೆ ಸಾಮಾನ್ಯವಾಗಿ ರಾಗಿಮುದ್ದೆ ಇದ್ದೇಇರುತ್ತದೆ.

No comments:

Popular Posts