Tuesday, December 16, 2008

ಹುರುಳಿಕಾಳಿನ ಮಸಾಲೆ ಸಾರು / Horse Gram Curry


ಹುರುಳಿಕಾಳು ಎಂದರೆ ಕೆಲವರು ಮೂಗು ಮುರಿಯುವುದುಂಟು! ಏಕೆಂದರೆ ಇದನ್ನು ಕುದುರೆ ಮತ್ತು ಹಸುಗಳಿಗೆ ಹಾಕಲು ಉಪಯೋಗಿಸುತ್ತಾರೆ.ಅವುಗಳಿಗೆ ಇದು ದಿನನಿತ್ಯದ ಆಹಾರ.ಇದರ ಹೆಸರೇ ಇಂಗ್ಲಿಷಿನಲ್ಲಿ Horse Gram ಎಂದು ಕರೆಯುತ್ತಾರೆಂದು ಎಲ್ಲರಿಗು ತಿಳಿದಿರುವ ವಿಷಯ.ಈ ಹುರುಳಿಕಾಳುಗಳನ್ನು ಕುದುರೆಗೆ ತಿನ್ನಿಸಲು ಹೆಚ್ಚಾಗಿ ಬಳಸುತ್ತಾರೆ. ಈ ಕಾಳುಗಳು ತುಂಬಾ ಪೌಷ್ಠಿಕವಾಗಿವೆ. ಇದು ತುಂಬಾ ಶಕ್ತಿ ಉಳ್ಳದ್ದಾಗಿದೆ. ಕೆಲವರು ಇದರಿಂದ ಸುಮಾರು ರೀತಿ ಅಡಿಗೆ ತಯಾರಿಸುತ್ತಾರೆ. ಇಲ್ಲಿ ತಿಳಿಸಿರುವುದು ನಾವು ತಯಾರಿಸುವಂತ ರುಚಿಯಾದ ಮೊಳಕೆ ಹುರುಳಿಕಾಳಿನ ಸಾರು.

ಹುರುಳಿಕಾಳಿನ ಮಸಾಲೆ ಸಾರು:

ಬೇಕಾಗುವ ಸಾಮಗ್ರಿಗಳು:

ಹುರುಳಿಕಾಳು- ಒಂದು ಬಟ್ಟಲು
ಈರುಳ್ಳಿ- ಎರಡು
ಬೆಳ್ಳುಳ್ಳಿ- ನಾಲ್ಕೈದು ಎಸಳು
ಶುಂಠಿ -ಒಂದಿಂಚು
ಹಸಿಮೆಣಸಿನಕಾಯಿ - ಒಂದು
ಹುರಿಗಡಲೆ ಸ್ವಲ್ಪ
ಗಸಗಸೆ-ಒಂದು ಚಿಕ್ಕ ಚಮಚ
ತೆಂಗಿನಕಾಯಿ -ಅರ್ಧ ಬಟ್ಟಲು
ಅಚ್ಚಖಾರದ ಪುಡಿ
ಧನಿಯಾ ಪುಡಿ
ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು
ಟಮೋಟೊ - ಎರಡು, ಹೆಚ್ಚಿಕೊಳ್ಳಿ
ಕೊತ್ತುಂಬರಿ ಸೊಪ್ಪು
ಪುದೀನ ಸೊಪ್ಪು
ತರಕಾರಿ -ಕ್ಯಾರೆಟ್
ಆಲೂಗೆಡ್ಡೆ
ಬದನೆಕಾಯಿ
ನವಿಲುಕೋಸು
ಹೂಕೋಸು
ಉಪ್ಪು
ಎಣ್ಣೆ

ತಯಾರಿಸುವ ವಿಧಾನ:

*ಮೊಳಕೆ ಕಾಳು,ಮಡಿಕೆ ಕಾಳು ಅಥವ ಮೊಳೆತ ಕಾಳು ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕರೆಯುತ್ತಾರೆ.ಮೊಳಕೆ ಕಾಳು ತಯಾರಿಸುವ ಬಗೆ;

ಹುರುಳಿಕಾಳನ್ನು ಚೆನ್ನಾಗಿ ತೊಳೆದು, ಇವತ್ತು ಕಾಳುಗಳು ಬೇಕೆಂದರೆ ಅದನ್ನು ಎರಡು ದಿನದ ಹಿಂದಿನ ರಾತ್ರಿ ನೆನೆಸಿ, ಮಾರನೆ ದಿನ ಮತ್ತೆ ಚೆನ್ನಾಗಿ ತೊಳೆದು ನೀರು ಬಸಿದುಕೊಂಡು,ಕಾಳನ್ನು ಗಾಳಿ ಆಡದ ಡಬ್ಬಿಯಲ್ಲಿ ಹಾಕಿಡಿ. ಅಥವ ಜಾಲರಿಗೆ ಹಾಕಿ ಮುಚ್ಚಿಟ್ಟರೆ ಸಹ ಮೊಳಕೆ ಬರುತ್ತದೆ. ನಮ್ಮ ಅಜ್ಜಿ,ಅಮ್ಮ ಮಾಡುತ್ತಿದ್ದ ತರಹ ಒಂದು ಕಾಟನ್ ಬಟ್ಟೆಯಲ್ಲಿ ಕಾಳನ್ನು ಹಾಕಿ ಗಂಟು ಕಟ್ಟಿ ಇಡಿ. ಮಾರನೇ ದಿನಕ್ಕೆ ಅದು ಮೊಳಕೆ ಬಂದಿರುತ್ತದೆ,(ಜಾಸ್ತಿ ಮೊಳಕೆ ಬೇಕಾದರೆ ಎರಡು ದಿನ ಬಿಡಿ). ಈಗ ಮೊಳಕೆ/ಮೊಳೆತ ಕಾಳು ರೆಡಿ.


ಮಸಾಲೆ ತಯಾರಿಸಲು:

ಒಂದು ಚಮಚ ಎಣ್ಣೆಯನ್ನು ಪ್ಯಾನ್ ಗೆ ಹಾಕಿ ,ಈರುಳ್ಳಿಯನ್ನು, ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಹಾಕಿ ಹುರಿದುಕೊಳ್ಳಿ. ಅದಕ್ಕೆ ಚೆಕ್ಕೆ, ಲವಂಗ, ಏಲಕ್ಕಿ, ಮೊಗ್ಗು, ಮೆಣಸು, ಪುದೀನ ಸೊಪ್ಪು ಮತ್ತು ಕೊತ್ತುಂಬರಿಸೊಪ್ಪು ಕೂಡ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ. ಹುರಿದ ಈ ಮಿಶ್ರಣದ ಜೊತೆಗೆ ಟಮೋಟೊ,ಅಚ್ಚಖಾರದ ಪುಡಿ, ಧನಿಯಾಪುಡಿ,ಗಸಗಸೆ,ಹುರಿಗಡಲೆ ಮತ್ತು ತೆಂಗಿನಕಾಯಿ ತುರಿ ಎಲ್ಲವನ್ನೂ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ. ಮಸಾಲೆ ರೆಡಿಯಾಯಿತು.

ಮೊದಲು ಪಾತ್ರೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ, ಅದಕ್ಕೆ ಚಿಟಿಕೆ ಸಾಸಿವೆ ಹಾಕಿ, ಚಟಪಟ ಅಂದ ಮೇಲೆ ಹೆಚ್ಚಿದ ತರಕಾರಿ ಹಾಕಿ, ಒಂದೆರಡು ನಿಮಿಷ ಹುರಿದು,ಕಾಳುಗಳನ್ನು ಹಾಕಿ ಅದನ್ನು ಐದು ನಿಮಿಷ ಹುರಿದು,ಅರಿಶಿಣ,ಉಪ್ಪು ಮತ್ತು ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ತಿರುವಿ,ನೀರು ಹಾಕಿ ಬೆರೆಸಿ ಮುಚ್ಚಿಟ್ಟು ಬೇಯಿಸಿ. ಕಾಳುಗಳು ಬೇಯುವವರೆಗು ಬೇಯಿಸಿ. ಉಪ್ಪು ಮತ್ತು ಕಾರ ನಿಮ್ಮ ರುಚಿಗೆ ತಕ್ಕಷ್ಟು ಬೆರೆಸಿ,ಇಳಿಸಿ. ಹುರುಳಿಕಾಳು ಸಾರು ತಯಾರಾಗುತ್ತದೆ. ಈ ಮಸಾಲೆ ಸಾರಿಗೆ ರಾಗಿಮುದ್ದೆ ಚೆನ್ನಾಗಿರುತ್ತದೆ. ಇದನ್ನು ಬಿಳಿಅನ್ನ,ಚಪಾತಿ &ಪರೋಟ ಯಾವುದರೊಂದಿಗಾದರೂ ಸರ್ವ್ ಮಾಡಿ.
* ಕುಕ್ಕರ್ ನಲ್ಲಿಯಾದರೆ ಒಂದು ಕೂಗು ಸಾಕು. ಅದರಲ್ಲಿ ಬೇಗ ಬೇಯುತ್ತದೆ ಕಾಳುಗಳು. ಸಾರಿಗೆ ನೀರು ನಿಮಗೆ ಹೇಗೆ ಬೇಕೋ ಸೇರಿಸಿಕೊಳ್ಳಿ. ಅನ್ನಕ್ಕೆ ಸ್ವಲ್ಪ ತೆಳು ಮಾಡಿಕೊಳ್ಳಿ. ಈ ರೀತಿಯ ಸಾರುಗಳು ಮಾರನೆ ದಿನ ಹೆಚ್ಚು ರುಚಿಯಾಗಿರುತ್ತವೆ. ಹುರುಳೀಕಾಳು ತುಂಬಾ ಶಕ್ತಿದಾಯಕ ಮತ್ತು ಉಷ್ಣ . ಮೊಳಕೆ ಬರಿಸಿ ಉಪಯೋಗಿಸಿದರೆ ಸ್ವಲ್ಪ ತಂಪು. ಈ ಕಾಳುಗಳನ್ನು ತಿನ್ನುವುದರಿಂದ ಯಾವ ತೊಂದರೆಯು ಇಲ್ಲ. ಆರೋಗ್ಯಕ್ಕೂ ಒಳ್ಳೆಯದು.

No comments:

Popular Posts