Monday, August 24, 2009

Dates Laddu/Ladu - ಖರ್ಜೂರದ ಉಂಡೆ:

ಖರ್ಜೂರದ ಉಂಡೆ:
ಖರ್ಜೂರವೂ ಒಣಗಿದ ಹಣ್ಣು(ಡ್ರೈ ಫ್ರೂಟ್ಸ್)ಗಳಲ್ಲೆಲ್ಲಾ ತುಂಬಾ ರುಚಿಯಾದ ಹಣ್ಣು. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಈ ಹಣ್ಣು ತುಂಬಾ ಉಷ್ಣ.
ಇದನ್ನು ತುಪ್ಪದ ಜೊತೆ ತಿಂದರೆ ಒಳ್ಳೆಯದು. ಖರ್ಜೂರದಲ್ಲಿ ಹಲವು ಬಗೆಗಳಿವೆ. ಖರ್ಜೂರವನ್ನು ಕಾಯಿಯಿಂದ ಹಿಡಿದು ಕೂಡ ಹಂತ ಹಂತವಾಗಿ ಬೆಳೆಯುತ್ತಿರುವ ಯಾವುದನ್ನು ತಿಂದರೂ,ಚೆನ್ನಾಗಿ ಹಣ್ಣಾಗಿರುವವರೆಗೂ ಕೂಡ ಒಂದೊಂದು ತರಹ ರುಚಿ ಕೊಡುತ್ತದೆ. ಒಂದೊಂದು ಹಂತದಲ್ಲಿ ಒಂದೊಂದು ರುಚಿ ಕೊಡುತ್ತದೆ. ಕಾಯಿಯಿಂದ ಹಣ್ಣಾಗುವವರೆಗಿನ ಯಾವ ಸಮಯದಲ್ಲಾದರೂ ಕಿತ್ತು ತಿನ್ನಬಹುದಾದಂತಹ ಹಣ್ಣು ಖರ್ಜೂರ. ಚೆನ್ನಾಗಿ ಹಣ್ಣಾದ ಮೇಲೂ ಕೂಡ ಅದು ಉಪಯೋಗಕ್ಕೆ ಬರುತ್ತದೆ,ಮುಂದೆ ಅದನ್ನೇ ಒಣಗಿಸಿ,'ಉತ್ತತ್ತಿ' ಅಂತ ತಯಾರಿಸುತ್ತಾರೆ. ಅದಂತೂ ವರುಷಗಟ್ಟಲೆ ಹಾಳಾಗದೆ ಇರುವುದರಿಂದ,ಯಾವಾಗಲೂ ಮನೆಯಲ್ಲಿ ಇಟ್ಟುಕೊಳ್ಳಬಹುದು. ಇದನ್ನು ಪಾಯಸ ಮತ್ತು ಇತರೆ ಉಂಡೆ ಮತ್ತು ಸಿಹಿಗಳಿಗೆ ಬೇಕಾದಾಗ ಉಪಯೋಗಿಸುತ್ತೇವೆ. ಈಗ ಇಲ್ಲಿ ಖರ್ಜೂರದಿಂದ ಉಂಡೆ/ಉಂಡಿಯನ್ನು ತಯಾರಿಸೋಣ.

ಬೇಕಾಗುವ ಸಾಮಗ್ರಿಗಳು:

ಖರ್ಜೂರ - ಒಂದು ಬಟ್ಟಲು
ಬೆಲ್ಲ - ರುಚಿಗೆ
ತುಪ್ಪ ಅಥವ ಬೆಣ್ಣೆ - ಎರಡು ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ
ಏಲಕ್ಕಿ ಪುಡಿ

ತಯಾರಿಸುವ ರೀತಿ:

ಮೊದಲಿಗೆ ಬಾಣಲೆಗೆ ತುಪ್ಪ/ಬೆಣ್ಣೆಯನ್ನು ಹಾಕಿ ಅದಕ್ಕೆ ಖರ್ಜೂರ ಮತ್ತು ಬೆಲ್ಲವನ್ನು ಹಾಕಿ,ಚೆನ್ನಾಗಿ ಕೆದಕಿ,ಅದನ್ನು ಹಾಗೇ ಐದು ನಿಮಿಷ ತಿರುಗಿಸುತ್ತಿರಿ. ಖರ್ಜೂರವೂ ಮೆತ್ತಾಗಾಗಿ ಮತ್ತು ಬೆಲ್ಲವೆಲ್ಲಾ ಕರಗಿ ಸ್ವಲ್ಪ ಉಂಡೆ ಹದಕ್ಕೆ ಬಂದಿದೆ ಎನಿಸಿದಾಗ, ತುಪ್ಪದಲ್ಲಿ ಕರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು,ಏಲಕ್ಕಿ ಪುಡಿಯನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ. ತುಂಬಾ ಗಟ್ಟಿಯಾಗುವ ಮೊದಲೇ ಒಲೆಯಿಂದ ಕೆಳಗಿಳಿಸಿ. ಸ್ವಲ್ಪ ಆರಿದ ನಂತರ ಚಿಕ್ಕ ಚಿಕ್ಕ ಉಂಡೆ ಕಟ್ಟಿ. ಈಗ ಪೌಷ್ಠಿಕವಾಗಿರುವಂತ ಖರ್ಜೂರದ ಉಂಡೆ ತಯಾರಾಗುತ್ತದೆ. ಮಕ್ಕಳಿಗೆ ತುಂಬಾ ಒಳ್ಳೆಯದು.

No comments:

Popular Posts