Friday, March 26, 2010

Panaka / Paniya / Juice- Shri RamaNavami paanaka

ಶ್ರೀ ರಾಮನವಮಿಯಲ್ಲಿ ತಯಾರಿಸುವ ಪಾನಕ:

ಶ್ರೀ ರಾಮನವಮಿ ಹಬ್ಬದಲ್ಲಿ ಬೇರೆ ತಿನಿಸುಗಳಿಗಿಂತ ಪಾನಕ ಮತ್ತು ಕೋಸುಂಬರಿ ತುಂಬಾ ಪ್ರಸಿದ್ಧವಾಗಿವೆ.
ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪಾನಕವನ್ನು ತಯಾರಿಸುತ್ತಾರೆ. ಕೆಲವರು ಇದಕ್ಕೆ ಕರಬೂಜ ಹಣ್ಣನ್ನು ಸೇರಿಸುತ್ತಾರೆ. ಇದನ್ನು ಸೇರಿಸಿದಾಗ ಇನ್ನೂ ಹೆಚ್ಚಿನ ರುಚಿಯನ್ನು ಕೊಡುತ್ತದೆ.

ಬೇಕಾಗುವ ಸಾಮಗ್ರಿಗಳು:

ಬೆಲ್ಲದ ಪುಡಿ ರುಚಿಗೆ ತಕ್ಕಷ್ಟು
ಕರಬೂಜ ಹಣ್ಣು ಸ್ವಲ್ಪ
ಒಣಶುಂಠಿ ಸ್ವಲ್ಪ
ಮೆಣಸಿನಕಾಳು ಸ್ವಲ್ಪ
ಸೋಂಪುಕಾಳು ಸ್ವಲ್ಪ
ನೀರು
ಚಿಟಿಕೆ ಉಪ್ಪು


ತಯಾರಿಸುವ ವಿಧಾನ:

ಒಣಶುಂಠಿ,ಸೋಂಪು ಮತ್ತು ಮೆಣಸಿನ ಕಾಳುಗಳನ್ನು ಸ್ವಲ್ಪ ಜಜ್ಜಿಕೊಳ್ಳಿ. ಬೆಲ್ಲ ಮತ್ತು ನೀರನ್ನು ಚೆನ್ನಾಗಿ ಬೆರೆಸಿ, ಬೆಲ್ಲ ಕರಗುವಂತೆ. ಇದರ ಜೊತೆಯಲ್ಲಿಯೇ ಕರಬೂಜ ಹಣ್ಣಿನ ಚೂರುಗಳನ್ನು ಸೇರಿಸಿ, ಕೈನಿಂದ ಹಣ್ಣನ್ನು ಚೆನ್ನಾಗಿ ಅದುಮಿ, ಹಣ್ಣು ಸ್ವಲ್ಪ ಸ್ವಲ್ಪ ಚೂರು ಇರುವಂತೆ ಬಿಡಿ.
*ಕರಬೂಜ ಹಣ್ಣನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ ಸೇರಿಸಬೇಡಿ. ಹಣ್ಣನ್ನು ಕೈನಲ್ಲಿಯೇ ಹಿಸುಕಿದರೆ, ಆ ಬೆಲ್ಲದ ನೀರಿನಲ್ಲಿ ಅದರ ಸುವಾಸನೆಯು ಸೇರುವುದರಿಂದ ರುಚಿಯೊಂದಿಗೆ ಅದರದ್ದೆ ಆದ ಘಮ ಘಮ ಪಾನಕಕ್ಕೆ ಬರುತ್ತದೆ. ಪಾನಕ ಕುಡಿಯುವಾಗ ಹಣ್ಣಿನ ಸಣ್ಣ ಸಣ್ಣ ಚೂರುಗಳು ಬಾಯಿಗೆ ಸಿಕ್ಕಿದರೆ ಚೆನ್ನ. ನಂತರ ಅದಕ್ಕೆ ಕುಟ್ಟಿದ ಪುಡಿ ಮತ್ತು ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಇದೆಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈನಿಂದ ಹಿಸುಕಿ ಬೆರೆಸಿ. ಈಗ ಪಾನಕ ತಯಾರಾಯಿತು.
ಇದು ಸಾಮಾನ್ಯವಾಗಿ ಶ್ರೀ ರಾಮನವಮಿ ಹಬ್ಬದ ದಿನ ತಯಾರಿಸುತ್ತಾರೆ. ಈ ತರಹ ಭಾಕಿ ದಿನಗಳಲ್ಲಿ ಮಾಡಿಕೊಂಡು ಕುಡಿದರೂ ಅದೇನೋ ಹಬ್ಬದ ದಿನ ಅದೊಂದು ತರಹ ಹೊಸ ರುಚಿಯೇನೋ ಎನಿಸುತ್ತೆ.

No comments:

Popular Posts